ಇಲಾಟೆರಿಡೆ 
ಕೋಲಿಯಾಪ್ಪೆರ ಗಣದ ಒಂದು ಕುಟುಂಬ. ಈ ಕುಟುಂಬದ ಕೀಟಗಳನ್ನು ಸ್ಕಿಪ್‍ಜಾಕ್ಸ್ ಅಥವಾ ಕ್ಲಿಶ್ ಬೀಟ್ಸ್ ಎಂಬ ಸಾಮಾನ್ಯ ನಾಮದಿಂದ ಗುರುತಿಸಲಾಗುತ್ತದೆ. ಪ್ರೌಢ ಜೀರುಂಡೆಯ ದೇಹ ಗಡುಸು. ಬಣ್ಣ ನಸುಗಪ್ಪು ಅಥವಾ ನಸುಕಂದು. ಬೆನ್ನಿನ ಮೇಲೆ ಮುಟ್ಟಿದರೆ ತಟಕ್ಕನೆ ಮೇಲಕ್ಕೆ ಚಿಮ್ಮಿ ಹಾರುವ ಗುಣ ಇದರ ವೈಶಿಷ್ಟ್ಯ. ಎದೆಯ ಮೊದಲನೆಯ ಖಂಡ ದೊಡ್ಡದು: ಆಕಾರ ಗುರಾಣಿಯಂತೆ. ಉದರ ಉದ್ದ ಮತ್ತು ಕಿರಿದು; ತುದಿಯಲ್ಲಿ ಸ್ವಲ್ಪ ಚೂಪು. ಕಾಲುಗಳು ಮತ್ತು ಕುಡಿ ಮೀಸೆಗಳು ಮೊಟಕು. ಸ್ಪರ್ಶ ಕುಡಿಮೀಸೆಗಳು ಗರಗಸದ ಅಥವಾ ಬಾಚಣೆಗೆಯ ಅಂಚಿನಂತೆ. ಈ ಜೀರುಂಡೆಗಳ ಡಿಂಭಗಳ ದೇಹ ತಂತಿಯಂತೆ ತೆಳು, ಚರ್ಮ ಗಡುಸು-ಆದ್ದರಿಂದ ತಂತಿ ಹುಳುಗಳೆಂದೇ (ವಯರ್ ವಮ್ರ್ಸ್) ಎಂದು ಇವನ್ನು ಕರೆಯುವುದಿದೆ. ಭೂಮಿಯಲ್ಲಿ ನಾಟಿರುವ ಬೀಜಗಳನ್ನೂ ಸಸ್ಯಗಳ ಬೇರುಗಳನ್ನೂ ಇವು ತಿಂದು ನಾಶ ಮಾಡುತ್ತವೆ. ಇವುಗಳ ಹಾವಳಿ ಬಹಳ ಹೆಚ್ಚು ಮತ್ತು ಹತೋಟಿಗೆ ತರುವುದು ಬಹಳ ಕಷ್ಟ. ಪೈರೋಪೋರಸಿನ ಕೆಲವು ಪ್ರಭೇದಗಳು ಸ್ವಯಂಪ್ರಕಾಶಕ ರಚನೆಗಳನ್ನು ಹೊಂದಿವೆ.

(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ